ಮದುವೆ ಅಂದ್ರೆ ಗಂಡಿಗಿರಲಿ ಹೆಣ್ಣಿಗಿರಲಿ, ಕನಸು ಇದ್ದೇ ಇರುತ್ತೆ. ತನ್ನ ಬಾಳ ಸಂಗಾತಿ ಹೀಗೆ ಇರಬೇಕು ಎಂದು ಬಯಸುತ್ತಾರೆ ಹಲವರು. ಆದರೆ ಕೆಲವೊಂದು ಮದುವೆಗಳು ಮಾತ್ರ ಬಹಳ ವಿಚಿತ್ರ ಅನ್ನಿಸುತ್ತೆ ನೋಡಿ. ಪ್ರೀತಿಸಿ ಮದುವೆ ಆಗುವವರಿಗೆ ಜಾತಿ ಧರ್ಮ ಎಲ್ಲಾ ಮುಖ್ಯಆಗಲ್ಲ. ಆದರೆ ಇತ್ತೀಚಿಗೆ ವಯಸ್ಸು ಕೂಡ ಮದುವೆಗೆ ಮುಖ್ಯವಲ್ಲ ಎನ್ನುವಂತೆ ಆಗಿದೆ.
ಅದೆಷ್ಟೋ ಹೆಣ್ನು ಮಕ್ಕಳು ಚಿಕ್ಕವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಅದರಲ್ಲೂ ತನಗಿಂತ ಮೂರು ಪಟ್ಟು ಹೆಚ್ಚು ವಯಸ್ಸಾಗಿರುವವರನ್ನೂ ಕೂಡ ವಿವಾಹ ವಾಗುತ್ತಾರೆ. ಇದನ್ನೂ ನೋಡಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಇಂತಹ ಒಂದು ಘಟನೆಗೆ ಬಾಂಗ್ಲಾದೇಶ (Bangladesh) ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ರಾಜಕಾರಣಿಗಳ ಮದುವೆ ಎಲ್ಲಾ ಎಷ್ಟು ಸುದ್ದಿಯಾಗಲ್ಲ. ಅದರಲ್ಲೂ ನಮ್ಮ ರಾಜ್ಯ ನೋಡುವುದಾದರೆ ರಾಜಕಾರಣದಲ್ಲಿ ಇರುವವರೆಲ್ಲರೂ ಸಂಸಾರಸ್ಥರೆ. ಹಾಗಾಗಿ ಅವರ ಮದುವೆ ವಿಶೇಷವೇನು ಅಲ್ಲ, ಆದರೆ ಬಾಂಗ್ಲಾದೇಶದ ರಾಜಕಾರಣಿ ಒಬ್ಬರ ಮದುವೆ ಸುದ್ದಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಇಷ್ಟುವರ್ಷ ಕೆಲಸದಲ್ಲಿಯೇ ಸಮಯ ಕಳೆದ ಈ ಸಚಿವರು (Minister) ಇದೀಗ 67 ರ ಹರಯದಲ್ಲಿ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ.
ಈ ವಯಸ್ಸಿನಲ್ಲಿ ಮದುವೆ ಆಗುತ್ತಾರೆ ಅಂದ್ರೆ ಅವರಿಗೆ ಈಗಾಗಲೇ ಮದುವೆ ಆಗಿರಬಹುದು ಎಂದು ಭಾವಿಸಬಹುದು. ಆದರೆ ಇವರಿಗೆ ಇದೇ ಮೊದಲ ಮದುವೆ. ಹೌದು, ಬಾಂಗ್ಲಾದೇಶದ 67ರ ಹರೆಯದ ವೃದ್ಧ ರೈಲ್ವೇ ಸಚಿವ ಮುಜಿಬುಲ್ ಹಕ್ ಅವರು ತನಗಿಂತ 38 ವರ್ಷ ಚಿಕ್ಕವಳಾದ ಹೊನುಫಾ ಅಖ್ತರ್ ರಿಕ್ತಾ ಅವರೊಂದಿಗೆ ಮದುವೆ ಆಗಿದ್ದಾರೆ. ಹೂನುಫಾಳಿಗೆ ಈಗ 29 ವರ್ಷ ವಯಸ್ಸು.
ಇವರಿಬ್ಬರ ನಡುವೆ ಇಷ್ಟು ವಯಸ್ಸಿನ ಅಂತರವಿದ್ದರೂ ಯಾರೂ ತಲೆಕೆಡಿಸಿಕೊಂಡಿಲ್ಲ. ಆದರೆ ಆಕೆ ಇಷ್ಟು ವಯಸ್ಸಾದವರನ್ನು ಯಾಕೆ ಮದುವೆ ಆಗಿದ್ದಾಳೆ ಎನ್ನುವುದು ಹಲವರ ಕುತೂಹಲಕ್ಕೂ ಕಾರಣವಾಗಿದೆ. ಅದೇನೇ ಇರಲಿ, ಇತ್ತೀಚಿಗೆ ಬಾಂಗ್ಲಾದ ಕೊಮಿಲ್ಲಾದಲ್ಲಿ ಬಹಳ ಸಡಗರದಿಂದ ಇವರ ವಿವಾಹ ಮಹೋತ್ಸವ ನಡೆಸಲಾಗಿದೆ.
ವರನ ಕಡೆಯಿಂದ ಸುಮಾರು 700 ಮಂದಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವರದಿ ಯಾಗಿದೆ. ಮದುವೆಯ ಸಂದರ್ಭದಲ್ಲಿ, ಢಾಕಾ-ಚಿತ್ತಗಾಂಗ್ ಹೆದ್ದಾರಿಯ ಹೆಚ್ಚಿನ ಛೇದಕಗಳನ್ನು ವರನನ್ನು ಸ್ವಾಗತಿಸಲು ಅಲಂಕರಿಸಲಾಗಿತ್ತು ಎಂಬುದಾಗಿಯೂ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು.
ಇದು ಸಚಿವ ಹಕ್ ಅವರ ಮೊದಲ ಮದುವೆ ಆಗಿದ್ದು, ಸಚಿವ ಹಕ್ ಇಷ್ಟುವರ್ಷ ರಾಜಕೀಯ ಜೀವನದಲ್ಲಿ ತುಂಬಾ ಬ್ಯುಸಿಯಾಗಿದ್ದು, ತಮ್ಮ ಬಗ್ಗೆ ಯೋಚಿಸಲು ಕೂಡ ಅವರಿಗೆ ಸಮಯವೇ ಇರಲಿಲ್ಲ. ಇದೀಗ ಎಲ್ಲರ ಆಶಯದ ಮೇರೆಗೆ ಕೊನೆಗೂ ಜೀವನದಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಚಿವರ ಆಪ್ರರು ತಿಳಿಸಿದ್ದಾರೆ.