ಗಣೇಶನಿಗೆ ಗರಿಕೆ ಹುಲ್ಲು ಅರ್ಪಿಸಿ ಪೂಜೆ ಮಾಡಲಾಗುತ್ತದೆ. ಗಣೇಶ ದೂರ್ವ ಅಥವಾ ಗರಿಕೆ ಪ್ರಿಯ ಎಂದೆ ಹೇಳಲಾಗುತ್ತೆ. ಇನ್ನೇನು ಗಣೇಶ ಹಬ್ಬ ಹತ್ತಿರ ಬರುತ್ತಿದೆ ಎಲ್ಲರ ಮನೆಯಲ್ಲಿಯೂ ದೂರ್ವ ತಂದು ಗಣೇಶ ನನ್ನ ಅಲಂಕರಿಸಲಾಗುತ್ತೆ. ಹಾಗಾದರೆ ಗಣೇಶನಿಗೆ ದೂರ್ವ ಅಥವಾ ಗರಿಕೆ ಹುಲ್ಲನ್ನು ಯಾಕೆ ಅರ್ಪಿಸಬೇಕು? ಗರಿಕೆ ಹುಲ್ಲಿನ ಮಹತ್ವವೇನು ತಿಳಿಯೋಣ ಬನ್ನಿ. ಗರಿಕೆ ಹುಲ್ಲನ್ನು ಗಣೇಶನಿಗೆ ಅರ್ಪಿಸುವ ಹಿಂದೆಯೂ ಒಂದು ಕಥೆ ಇದೆ.
ಅತ್ಯಂತ ಶ್ರೇಷ್ಠವಾದ ಗರಿಕೆ ಹುಲ್ಲು ಸಕಾರಾತ್ಮಕತೆಯನ್ನು ನೀಡುತ್ತದೆ. ಇದು ಗಣೇಶನಿಗೆ ಅರ್ಪಿತವಾದುದರ ಹಿಂದೆ ಒಂದು ಮಹತ್ಕಾರ್ಯ ನಡೆಯುತ್ತದೆ! ಅನಲಾಸುರ ಎಂಬ ರಾಕ್ಷಸ ತನ್ನ ಶಕ್ತಿಯಿಂದ ಸ್ವರ್ಗವನ್ನು ನಾಶ ಮಾಡುವುದಕ್ಕೆ ಮುಂದಾಗುತ್ತಾನೆ. ಬೆಂಕಿ ಉಂಡೆಗಳನ್ನು ಸೃಷ್ಟಿಸಿ ಸ್ವರ್ಗದ ಹಲವು ಭಾಗಗಳನ್ನ ಸುಟ್ಟು ಭಸ್ಮ ಮಾಡುತ್ತಾನೆ. ತನ್ನ ದಾರಿಗೆ ಅಡ್ಡವಾಗಿ ಸಿಕ್ಕ ಯಾರನ್ನಾದರೂ, ಯಾವ ವಸ್ತುವನ್ನಾದರೂ ಬೆಂಕಿಯಿಂದ ನಾಶಪಡಿಸುತ್ತಾನೆ.
ಅನಲಾಸುರನ ಈ ಕಾಟವನ್ನು ತಡೆಯಲಾಗದೆ ಸ್ವರ್ಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತೆ. ಕಡೆಗೆ ಶಾಂತಿ ಮರುಸ್ಥಾಪನೆಗಾಗಿ ಶ್ರೀ ಗಣೇಶನನ್ನ ಮೊರೆ ಹೋಗುತ್ತಾರೆ ದೇವಾನು ದೇವತೆಗಳು. ಸ್ವರ್ಗ ವಾಸಿಗಳ ಅಳಲನ್ನು ಕೇಳಿ ಕೊನೆಗೆ ಗಣೇಶ ಅನಲಾಸುರನ ವಧೆಗೆ ಒಪ್ಪಿಗೆ ಸೂಚಿಸುತ್ತಾನೆ. ಕೊನೆಗೆ ಅನಲಾಸುರನ ಜೊತೆ ಹೋರಾಡಲು ಗಣೇಶನ ವಿರಾಟ ರೂಪ ಧರಿಸುತ್ತಾನೆ.
ಬೆಂಕಿಯ ಉಂಡೆ ಅಂತಿದ್ದ ಅನಲಾಸುರನನ್ನು ನುಂಗುತ್ತಾನೆ ಗಣೇಶ. ಇದರಿಂದ ಸ್ವರ್ಗದ ಆಪತ್ತು ಏನೋ ಕಳಿಯುತ್ತದೆ. ಆದರೆ ಗಣೇಶ ತಣ್ಣಗಾಗುವುದಿಲ್ಲ. ಇದರಿಂದ ಬಹಳ ವಿಚಲಿತನಾಗುತ್ತಾನೆ ಗಣೇಶ. ಕೊನೆಗೆ ಗಣಪತಿಯ ಸಹಾಯಕ್ಕೆ ಬಂದ ಚಂದ್ರ, ಗಣಪತಿಯ ತಲೆಯ ಮೇಲೆ ಕೂರುತ್ತಾನೆ ಹಾಗಾಗಿ ಗಣೇಶನಿಗೆ ಬಾಲಚಂದ್ರ ಎನ್ನುವ ಹೆಸರು ಇದೆ. ಭಗವಂತ ವಿಷ್ಣು ಶಾಖ ಕಡಿಮೆ ಆಗಲು ಗಣಪತಿಯ ಕೈನಲ್ಲಿ ಕಮಲ ಕೊಡುತ್ತಾನೆ.
ಶಿವನು ಗಣೇಶನ ಹೊಟ್ಟೆಗೆ ಹಾವನ್ನು ಸುತ್ತುತ್ತಾನೆ. ಆದರೆ ಏನೇ ಮಾಡಿದರೂ ಗಣೇಶ ಮಾತ್ರ ತಂಪಾಗುವುದಿಲ್ಲ. ಕೊನೆಗೆ ಋಷಿಮುನಿಗಳು ಭಕ್ತಿಯಿಂದ ಗರಿಕೆ ಹುಲ್ಲನ್ನು ಗಣೇಶನ ತಲೆಯ ಮೇಲೆ ಇಡುತ್ತಾರೆ ಆಗ ಗಣೇಶ ಕೂಡಲೇ ಮೊದಲಿನಂತೆ ಆಗುತ್ತಾನೆ. ಅತನಲ್ಲಿದ್ದ ಶಾಖ ಕಡಿಮೆಯಾಗುತ್ತದೆ. ಇದು ಗರಿಕೆ ಹುಲ್ಲಿನ ಕಥೆ ಹಾಗೂ ಮಹತ್ವ. ಗರಿಕೆ ಹುಲ್ಲು ಸಕಾರಾತ್ಮಕತೆಯ ಸಂಕೇತ.
ಗಣೇಶ ಹಬ್ಬದಂದು ಮೂರು ಅಥವಾ ಐದು ಅಥವಾ 21 ಗರಿಕೆ ಹುಲ್ಲುಗಳನ್ನು ಗಣಪತಿಗೆ ಅರ್ಪಿಸಿದರೆ ಆ ವ್ಯಕ್ತಿಯ ಮನಸ್ಸಿನಲ್ಲಿ ಇರುವ ಎಲ್ಲಾ ನಕಾರಾತ್ಮಕತೆಯು ಹೋಗುತ್ತದೆ. ಹಾಗಾಗಿ ಗಣೇಶ್ ಹಬ್ಬದಂದು ತಪ್ಪದೆ ಗಣೇಶನಿಗೆ ಇಷ್ಟವಾದ ದೂರ್ವ ಅಥವಾ ಗರಿಕೆ ಹುಲ್ಲನ್ನು ಅರ್ಪಿಸಿ. ಗರಿಕೆಯನ್ನು ಒಟ್ಟಾಗಿ ಕಟ್ಟು ಕಟ್ಟಿ ಅದನ್ನು ನೀರಿನಲ್ಲಿ ಮುಳುಗಿಸಿ ಗಣೇಶನಿಗೆ ಅರ್ಪಿಸಬೇಕು.
ಹಳ್ಳಿಗಳಲ್ಲಿ ಮನೆಯ ಎದುರೆ ಗರಿಕೆ ಹುಲ್ಲುಗಳು ಬೆಳೆದಿರುತ್ತವೆ. ಪೇಟೇಗಳಲ್ಲಿ ದುಡ್ಡು ಕೊಟ್ಟು ಖರೀದಿಸಬೇಕು. ಹಾಗಾದರೂ ಸರಿ ದೂರ್ವ ವನ್ನು ಮಹಾಗಣಪನಿಗೆ ದೂರ್ವ ಅರ್ಪಿಸದೇ ಇರಬೇಡಿ. ನೀವು ಮೊದಕ ಮೊದಲಾದ ತಿನಿಸುಗಳನ್ನು ಹೇಗೆ ಗಣೇಶನಿಗೆ ಪ್ರಿಯವೆಂದು ಮಾಡಿ ನೈವೇದ್ಯ ಮಾಡುತ್ತಿರೋ ಹಾಗೆ ಗರಿಕೆಯೂ ಕೂಡ ಅಷ್ಟೇ ಶ್ರೇಷ್ಠ ಎನ್ನುವುದು ನೆನಪಿರಲಿ.