ಯಶ್ ನ ಕೆಜಿಎಫ್ ಯಶಸ್ಸಿನ ಬಗ್ಗೆ ಎಲ್ಲರಿಗೂ ಗೊತ್ತು. ಅದು ಸಾಧಾರಣ ಯಶಸ್ಸಲ್ಲಾ. ಅದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ಇಂದು ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಾಗಿರದೆ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದಾರೆ. ಕೆರೆಗಳನ್ನು ನಿರ್ಮಾಣ ಮಾಡುವ ದೊಡ್ಡ ಅಭಿಯಾನವನ್ನು ಯಶ್ ನಡೆಸಿದ್ದಾರೆ.
ಈಗಾಗಲೇ ಹಲವು ಕಡೆ ಯಶ್ ಕೆರೆಯ ಹೂಳೆತ್ತಿಸಿ ಅದರಲ್ಲಿ ಸರಿಯಾಗಿ ನೀರು ತುಂಬುವಂತೆ ಮಾಡಿದ್ದಾರೆ. ಇದರಿಂದ ಅದೆಷ್ಟೋ ಹಳ್ಳಿಗಳು ತಮ್ಮ ಜಮೀನಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಕೊಂಚ ತಗ್ಗಿದೆ ಎಂದರೆ ತಪ್ಪಾಗಲ್ಲ. ಇನ್ನು ಯಶ್ ತಮ್ಮದೇ ಆದ ಫಾರ್ಮ್ ಹೌಸ್ ಹೊಂದಿದ್ದಾರೆ ಇದನ್ನು ಯಶ್ ತೋಟ ಅಂತಾನೆ ಕರೆಯಬಹುದು.
ಹೌದು, ನೂರಾರು ಎಕರೆ ಭೂಮಿಯನ್ನು ಖರೀದಿಸಿ ಅದನ್ನ ಕೃಷಿ ಭೂಮಿಯಾಗಿ ಹಾಗೂ ಸಾಕಷ್ಟು ಗಿಡ ಮರಗಳನ್ನು ಬೆಳೆಸುವ ಉದ್ದೇಶದಿಂದ ಜಮೀನಿನ ಮಾರ್ಪಾಡಿಸುವ ಕೆಲಸ ನಡೆದಿದೆ. ಇಂತಹ ಒಂದು ಭೂಮಿಯನ್ನು ಖರೀದಿಸುವುದು ಯಶ್ ಅವರ ತಂದೆಯ ಕನಸಾಗಿತ್ತು. ಕಾಡಾಗಿದ್ದ, ವ್ಯರ್ಥವಾಗುತ್ತಿದ್ದ ಭೂಮಿಯನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸುವತ್ತ ಯಶ್ ಕಾರ್ಯಪ್ರವೃತ್ತರಾಗಿದ್ದಾರೆ.
ಯಶ್ ಅವರ ತಂದೆ ಹೇಳುವಂತೆ ಅವರ ಈ ಜಮೀನಿನ ಸೂಕ್ತ ಒಂದು ರೌಂಡ್ ಹಾಕಿಕೊಂಡು ಬರಲು ಸುಮಾರು ಐದು ಕಿಲೋ ಮೀಟರ್ನಷ್ಟು ನಡೆಯಬೇಕು. ಹಾಗಾದ್ರೆ ಆ ಜಮೀನು ಎಷ್ಟು ದೊಡ್ಡದಿರಬಹುದು ಎಂದು ನೀವೇ ಊಹಿಸಿಕೊಳ್ಳಿ. ನಟ ಯಶ್ ಅವರು ಇಷ್ಟು ದೊಡ್ಡ ಭೂಮಿ ಖರೀದಿಸಿ ಅದರಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ? ಹೌದು ಯಶ್ ತೋಟದಲ್ಲಿ ನಿಮಗೆ ನೋಡಲು ನೂರಾರು ರೀತಿಯ ಮರ ಗಿಡಗಳು ಸಿಗುತ್ತವೆ.
ತೇಗ, ಗಂಧ, ಚಿಕ್ಕು, ಹಲಸು, ಮಾವು, ನೇರಳೆ, ಸೀಬೆ ಮರ ಹೀಗೆ ಹತ್ತು ಹಲವು ಜಾತಿಯ ಮರಗಳು ಇವೆ. ಅಷ್ಟೇ ಅಲ್ಲ ತಮ್ಮ ಜಮೀನಿನ ಸುತ್ತ ಸುಮಾರು ನಾಲ್ಕರಿಂದ ಐದು ಕೆರೆಗಳನ್ನ ನಿರ್ಮಿಸಿದ್ದಾರೆ. ಮಳೆಗಾಲದಲ್ಲಿ ಸುಮ್ಮನೆ ಹರಿದು ಹೋಗುವ ನೀರನ್ನು ಕೆರೆಗೆ ಬರುವ ರೀತಿ ಮಾಡಿ ಸದಾ ಈ ಭೂಮಿಯಲ್ಲಿ ನೀರು ಇರುವಂತೆ ಕೆರೆಗಳನ್ನ ನಿರ್ಮಿಸಿದ್ದಾರೆ.
ಯಶ್ ಈ ಜಾಗವನ್ನು ಖರೀದಿಸಿ ಸುಮಾರು ನಾಲ್ಕು ವರ್ಷ ಆಗಿರಬಹುದು ಇನ್ನು ಐದರಿಂದ ಹತ್ತು ವರ್ಷಗಳಲ್ಲಿ ತೋಟವನ್ನು ನೋಡಬೇಕು ಎಂದು ಅನಿಸುವ ಅಷ್ಟರಮಟ್ಟಿಗೆ ಈ ತೋಟವನ್ನು ಅಭಿವೃದ್ಧಿ ಮಾಡುವ ಮಹಾದಾಸೆಯನ್ನು ಹೊಂದಿದ್ದಾರೆ. ಇನ್ನು ಯಶ್ ಅವರ ಈ ತೋಟದಲ್ಲಿ ಚಿಕ್ಕು, ಮಾವು, ಹಲಸು ಇಂತಹ ಸಾಕಷ್ಟು ವಿಧದ ಹಣ್ಣುಗಳು ಯಥೇಚ್ಛವಾಗಿ ಬೆಳೆಯುತ್ತವೆ.
ಆದರೆ ಇದನ್ನು ಮಾರಾಟ ಮಾಡಿ ಹಣ ಗಳಿಸುವ ಉದ್ದೇಶ ಅವರದ್ದಲ್ಲ. ಸುತ್ತಲಿನ ಪ್ರಾಣಿ ಪಕ್ಷಿಗಳಿಗೆ ಆಹಾರವಾಗಿ ಈ ಹಣ್ಣು ಕಾಯಿಗಳು ಉಪಯೋಗವಾಗುತ್ತಿವೆ. ಇನ್ನು ಹೆಚ್ಚುಳಿದ ಫಲಗಳನ್ನು ತಮ್ಮ ಸ್ನೇಹಿತರಿಗೆ ನೀಡುತ್ತಾರೆ. ಹೌದು, ಯಶ್ ಅವರು ನಿರ್ಮಾಣ ಮಾಡುತ್ತಿರುವ ಈ ತೋಟದಲ್ಲಿ ಸಾಕಷ್ಟು ವಿಧದ ಪ್ರಾಣಿ ಪಕ್ಷಿಗಳು ಇವೆ.
ಸಂಜೆ ಹೊತ್ತು ಹಾಗೂ ಬೆಳಗಿನ ಸಮಯ ನೂರಾರು ರೀತಿಯ ಪಕ್ಷಿಗಳ ಕೂಗು ಕಿವಿಗೆ ಇಂಪನ್ನು ನೀಡುತ್ತದೆ. ನಾವು ಕೋಳಿ, ಕಾಗೆ ಮೊದಲಾದ ಪಕ್ಷಿಗಳನ್ನು ಹೇಗೆ ಸುಲಭವಾಗಿ ನೋಡುತ್ತೇವೆಯೋ ಅದೇ ರೀತಿ ಇಲ್ಲಿ ಸಾಕಷ್ಟು ನವಿಲುಗಳು ನೆಲೆಯೂರಿವೆ. ಯಶ್ ಅವರ ತೋಟಕ್ಕೆ ಹೋದರೆ ಒಂದಿಷ್ಟು ಸಮಯ ಅಲ್ಲಿಯೇ ಕಾಲ ಕಳೆಯೋಣ ಎನಿಸುತ್ತದೆ.