ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಬರೆದು, ನಿರ್ದೇಶಿಸಿ ನಟಿಸಿರುವ ರವಿ ಬೋಪಣ್ಣ ಸಿನಿಮಾದ ಪ್ರೀ ಇವೆಂಟ್ ಅದ್ಧೂರಿಯಾಗಿ ನೆರವೇರಿದೆ. ಈ ಸಂದರ್ಭದಲ್ಲಿ ಸಿನಿಮಾ ರಂಗದ ಗಣ್ಯರು ಉಪಸ್ಥಿತರಿದ್ದರು. ಸ್ಯಾಮ್,ಡಲ್ ವುಡ್ ನಟರಾದ ಜಗ್ಗೇಶ್, ಕಿಚ್ಚ ಸುದೀಪ್, ಮೋಹನ್ ಮೊದಲಾದವರು ಭಾಗವಹಿಸಿದ್ದರು. ಈ ಸಮಯದಲ್ಲಿ ರವಿಚಂದ್ರನ್ ತಮ್ಮ ಜೀವನದ ಕಷ್ಟದ ಸಮಯವನ್ನು ಕೂಡ ಹಂಚಿಕೊಂಡಿದ್ದಾರೆ.
ಸಿನೀ ರಂಗದ ಸ್ನೇಹಿತರನ್ನ ಹೊರತುಪಡಿಸಿ ಹೊರಗಿನ ಸ್ನೇಹಿತರು ಕೂಡ ತನಗೆ ಎಷ್ಟು ಸಹಾಯ ಮಾಡಿದ್ದಾರೆ ಅನ್ನೋದನ್ನ ರವಿಚಂದ್ರನ್ ಬಿಚ್ಚಿಟ್ಟಿದ್ದಾರೆ. ರವಿಚಂದ್ರನ್ ಅವರ ಮಗಳ ಮದುವೆಯ ಏರ್ಪಾಡು ನಡೆದಿತ್ತು. ಆದರೆ ಈ ಸಮಯದಲ್ಲಿ ಆರ್ಥಿಕವಾಗಿ ರವಿಚಂದ್ರನ್ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. ಆದರೂ ಒಂದು ಕಡೆ ಮದುವೆ ತಯಾರಿ ನಡೆಯುತ್ತದೆ. ಈ ಸಂದರ್ಭದಲ್ಲಿ ರವಿಚಂದ್ರನ್ ಅವರ ಪರಿಸ್ಥಿತಿಯನ್ನು ಅರಿತುಕೊಂಡ ಅವರ ಸ್ನೇಹಿತರು ಮನೆಗೆ ಬರುತ್ತಾರೆ.
ಅವರೇ ರಮೇಶ್, ವೆಂಕಟೇಶ್. ಇಬ್ಬರು ಸ್ನೇಹಿತರು ರವಿಚಂದ್ರನ್ ಅವರ ಮನೆಗೆ ಬಂದು ಇದು ನಿಮ್ಮ ಮಗಳ ಮದುವೆಗೆ ಗಿಫ್ಟ್ ಸರ್ ಅಂತ ಬಾಕ್ಸ್ ಒಂದನ್ನು ಕೊಡುತ್ತಾರೆ. ಮದುವೆ ಇನ್ನೂ ತಡ ಇದೆಯಲ್ಲ ಹೀಗೆ ಯಾಕೆ ಗಿಫ್ಟ್ ಕೊಡ್ತೀರಿ ಅಂತ ಕೇಳಿದ್ರೆ ಇರ್ಲಿ ಇಟ್ಟುಕೊಳ್ಳಿ ಅಂತ ಹೇಳಿ ಅವರಿಬ್ಬರು ಹೊರಟು ಹೋಗ್ತಾರೆ. ಆದರೆ ಅದನ್ನ ತೆರೆದು ನೋಡಿದಾಗ ಅದರಲ್ಲಿ ಮದುವೆ ಖರ್ಚಿಗೆ ಸಾಕಷ್ಟು ಹಣವನ್ನ ನೀಡಿ ಹೋಗಿದ್ರು ಸ್ನೇಹಿತರು.
ಅದೇ ರೀತಿ ಮಗಳ ಮದುವೆಗೆ ಬಂಗಾರವನ್ನು ಕೊಂಡುಕೊಳ್ಳಲು ತನ್ನ ಸ್ನೇಹಿತನ ಬಂಗಾರದ ಅಂಗಡಿಗೆ ಹೋಗುತ್ತಾರೆ. ರವಿಚಂದ್ರನ್ ತಮ್ಮ ಕೈಯಲ್ಲಿರುವ ಸ್ವಲ್ಪ ಹಣವನ್ನು ಕೊಟ್ಟು ನನಗೆ ಆರು ತಿಂಗಳ ಕಾಲಾವಧಿ ಕೊಡು ಎಲ್ಲಾ ಸಾಲವನ್ನು ತೀರಿಸುತ್ತೇನೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಸಜ್ಜನ್ ಬಂಗಾರವನ್ನು ಕೊಟ್ಟು ರವಿಚಂದ್ರನ್ ಅವರು ಕೊಟ್ಟಿರುವ ಹಣವನ್ನು ಹಿಂತಿರುಗಿಸಿ ನಿನಗೆ ಯಾವಾಗ ಆಗುತ್ತೋ ಅವಾಗ ಹಿಂತಿರುಗಿಸಿ ಕೊಡು ಸಾಕು ಎಂದು ಹೇಳುತ್ತಾರೆ.
ಇಂತಹ ಅದ್ಭುತ ಸ್ನೇಹಿತರನ್ನು ಹೊಂದಿರುವ ನಾನು ನಿಜಕ್ಕೂ ಪುಣ್ಯವಂತ ಅಂತ ರವಿಚಂದ್ರನ್ ಸಂದರ್ಭದಲ್ಲಿ ಹೇಳಿದ್ದಾರೆ. ವೇದಿಕೆಯಲ್ಲಿ ಅವರ ಸ್ನೇಹಿತರಾದ ರಮೇಶ್ ವೆಂಕಟೇಶ್ ಹಾಗೂ ಸಜ್ಜನ್ ಅವರನ್ನು ಕರೆಸಿ ಹಣ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕಲ್ಲ ನಿಜಕ್ಕೂ ನನ್ನ ಜೊತೆ ನಿಂತ ನನ್ನ ಅತ್ಯುತ್ತಮ ಸ್ನೇಹಿತರು ಇವರು ಅಂತ ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ ರವಿಚಂದ್ರನ್.
ಹಾಗೆಯೇ ಜಗ್ಗೇಶ್ ಹಾಗೂ ಸುದೀಪ್ ಬಗ್ಗೆಯೂ ಮಾತನಾಡಿರುವ ರವಿಚಂದ್ರನ್ ನಿಜಕ್ಕೂ ಇಂಥವರಿಂದಲೇ ನಾನು ಇಂದು ಉಸಿರಾಡಿಸುತ್ತಿದ್ದೇನೆ ಎನ್ನುವ ಮಾತನ್ನು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರ ಹೆಸರನ್ನ ನೆನೆಸಿಕೊಂಡರೆ ಈಗಲೂ ಮೈ ರೋಮಾಂಚನವಾಗುತ್ತೆ ಅಂತಹ ಅದ್ಭುತ ವ್ಯಕ್ತಿ ಅವರು ಅಂತ ಕಿಚ್ಚ ಸುದೀಪ್ ಬಗ್ಗೆ ರವಿಚಂದ್ರನ್ ತಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಹಂಚಿಕೊಂಡಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿ, ನಿರ್ಮಿಸಿ ನಟಿಸಿರುವ ಚಿತ್ರ ರವಿ ಬೋಪಣ್ಣ. ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರದ ಟ್ರೈಲರ್ ಇನ್ನಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಇನ್ನು ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕಾವ್ಯ ಶೆಟ್ಟಿ, ಮೋಹನ್, ರಾಧಿಕಾ ಕುಮಾರಸ್ವಾಮಿ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಇನ್ನೇನು ತೆರೆಕಾಣಲಿರುವ ಈ ಚಿತ್ರದಲ್ಲಿ ಹಾಡಿನ ವಿಶ್ಯುವಲ್ ಟ್ರೀಟ್ ’ಮಲ್ಲ’ ನನ್ನು ಮತ್ತೆ ನೆನಪಿಸುತ್ತೆ!