ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಉತ್ತಮ ಸಿನಿಮಾಗಳ ಹಿನ್ನೆಲೆಯನ್ನು ನೋಡಿದರೆ ಅಲ್ಲಿ ನಿರ್ದೇಶಕರ ಪ್ರತಿಭೆ ಅನಾವರಣಗೊಳ್ಳುತ್ತೆ. ನಿಜಕ್ಕೂ ಕೆಲವು ವಿಷಯಗಳಲ್ಲಿ ಸ್ಯಾಂಡಲ್ವುಡ್ ಲಕ್ಕಿ ಎಂದು ಹೇಳಬಹುದು. ಯಾಕಂದ್ರೆ ಇಲ್ಲಿ ಸಾಕಷ್ಟು ಅತ್ಯುತ್ತಮ ಕಥೆಯನ್ನು ಹೆಣೆಯುವಂತಹ ನಿರ್ದೇಶಕರು ಇದ್ದಾರೆ. ಅಂತವರಲ್ಲಿ ನಿರ್ದೇಶಕ ನಾಗಶೇಖರ್ ಕೂಡ ಒಬ್ಬರು. ಚಂದನವನದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿರುವ ನಿರ್ದೇಶಕ ನಾಗಶೇಖರ್.
ಒಬ್ಬ ಹಾಸ್ಯ ಕಲಾವಿದನಾಗಿಯೂ ಕೆಲವು ಸಿನಿಮಾಗಳಲ್ಲಿ ಪಾತ್ರ ನಿಭಾಯಿಸಿರುವ ನಾಗಶೇಖರ್ ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನಾಗಶೇಖರ್ ನಿರ್ದೇಶನದ ಶ್ರೀ ಕೃಷ್ಣ, ಅಮರ್ ಮೈನಾ, ಸಂಜು ವೆಡ್ಸ್ ಗೀತಾ, ಮಾಸ್ತಿಗುಡಿ, ಅರಮನೆ ಈ ಎಲ್ಲಾ ಸಿನಿಮಾಗಳು ತುಂಬಾನೇ ಹಿಟ್ ಆಗಿವೆ. ಸದಾ ಸಿನಿಮಾ ದ ಬಗ್ಗೆ ಯೋಚನೆ ಮಾಡುವ ನಾಗಶೇಖರ್ ಇದೀಗ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳಿನಲ್ಲಿಯೂ ನಿರ್ದೇಶನ ಮಾಡಿ ತಮ್ಮ ಪ್ರತಿಭೆಯನ್ನು ತೋರಿಸಲು ಹೊರಟಿದ್ದಾರೆ.
ಹೌದು, ನಿರ್ದೇಶಕ ನಾಗಶೇಖರ್, ‘ನವೆಂಬರ್ ಮಳೆಯಿಲ್ ನಾನುಂ ಅವನುಂ’ಎನ್ನುವ ಸಿನಿಮಾವನ್ನು ತಮಿಳಿನಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಆಕ್ಷನ್ ಕಟ್ ಹೇಳಿರುವುದು ಮಾತ್ರವಲ್ಲದೆ ಸಿನಿಮಾದ ನಾಯಕ ನಟನಾಗಿಯೂ ಕೂಡ ಅಭಿನಯಿಸುತ್ತಿದ್ದಾರೆ. ಇನ್ನು ನಾಯಕಿ ನಟಿಯಾಗಿ ಮಲಯಾಳಂ ನ ಖ್ಯಾತ ನಟಿ ಅನು ಸೀತಾರಾ ಈ ಸಿನಿಮಾಕ್ಕೆ ಬಣ್ಣ ಹಚ್ಚಲಿದ್ದಾರೆ. ತಮಿಳಿನಲ್ಲಿ ತೆರೆಕಾಣಲಿರುವ ಈ ಸಿನಿಮಾ ಕನ್ನಡದಲ್ಲಿಯೂ ಕೂಡ ಡಬ್ ಆಗಲಿದೆ.
ನೀವು ತಮಿಳಿನಲ್ಲಿ ಯಾಕೆ ಈ ಸಿನಿಮಾವನ್ನು ಮಾಡಿದ್ರಿ, ಕನ್ನಡದಲ್ಲಿಯೇ ಮಾಡಬಹುದಿತ್ತಲ್ಲ ಅಂತ ಹಲವರ ಪ್ರಶ್ನೆ. ಇದಕ್ಕೆಲ್ಲಕ್ಕೂ ನಿರ್ದೇಶಕ ನಾಗಶೇಖರ್ ಉತ್ತರ ನೀಡಿದ್ದಾರೆ. ‘ಇದು ನವೆಂಬರ್ ಡಿಸೆಂಬರ್ ಸಮಯದಲ್ಲಿ ಇರುವ ಮಳೆಗಾಲದಲ್ಲಿ ನಿರ್ಮಾಣವಾದ ಸಿನಿಮಾ. ಈ ಸಿನಿಮಾಕ್ಕಾಗಿ ಕಥೆಯನ್ನು ಬರೆದ ನಂತರ ಒಬ್ಬ ನಟನಿಗೆ ಅಪ್ರೋಚ್ ಮಾಡಿದೆ. ಆದರೆ ಅವರು ಇದು ಸೆನ್ಸಾರ್ ಇಶ್ಯೂ ಆಗಬಹುದು ಎಂದು ಹೇಳಿದರು.
ಯಾಕೆಂದರೆ ಇಲ್ಲಿ ಹೀರೋ ಅಂಗ ವೈಕಲ್ಯವನ್ನು ಹೊಂದಿರುತ್ತಾನೆ. ನಂತರ ಸೆನ್ಸಾರ್ ಶಿವು ಅವರ ಬಳಿ ಈ ವಿಷಯವನ್ನು ಮುಂದಿಟ್ಟಾಗ ಅವರು ಕಥೆಯನ್ನು ಕೇಳಿ ಈ ಸಿನಿಮಾಕ್ಕೆ ಹೀರೋ ಯಾರು ಅಂತ ಕೇಳಿದರು. ನಾನು ಹೀರೋ ಆಗಿ ಯಾರನ್ನು ಆಯ್ಕೆ ಮಾಡಿದ್ದೇನೋ ಅವರ ಹೆಸರನ್ನು ಹೇಳಿದೆ. ಅದಕ್ಕೆ ತಕ್ಷಣ ಶಿವು ಅವರು ಈ ಸಿನಿಮಾಕ್ಕೆ ನೀನು ನಾಯಕನಾಗಿ ನಟಿಸಿದರೆ ಮಾತ್ರ ಆ ಸಿನಿಮಾ ಓಡುತ್ತೆ ಅಂತ ಹೇಳಿದ್ರು.
ನಾನು ಸಿನಿಮಾ ನಾಯಕನಾಗಿ ನಟಿಸಿದ್ರೆ ನನಗೆ ಯಾರು ಪ್ರೊಡ್ಯೂಸರ್ ಸಿಗುತ್ತಾರೆ ಅಂತ ಕೇಳಿದೆ. ಅದಕ್ಕೆ ತಕ್ಷಣ ನಾನೇ ಪ್ರೋಡ್ಯೂಸ್ ಮಾಡುತ್ತೇನೆ ಎಂದು ಒಪ್ಪಿಕೊಂಡರು. ನಂತರ ತಮಿಳಿನಲ್ಲಿ ಇಂತಹ ಕಥೆಯನ್ನು ಸ್ವೀಕರಿಸುತ್ತಾರೆ ಎನ್ನುವ ಕಾರಣಕ್ಕೆ ತಮಿಳಿನಲ್ಲಿಯೇ ಈ ಸಿನಿಮಾ ನಿರ್ದೇಶನ ಮಾಡುವುದಕ್ಕೆ ಮುಂದಾದೆ’ ಎಂದು ನಾಗಶೇಖರ್ ತಿಳಿಸಿದ್ದಾರೆ. ಬರುವ ನವೆಂಬರ್ ಹೊತ್ತಿಗೆ ಈ ಸಿನಿಮಾ ತೆರೆ ಕಾಣಲಿದೆ.
ಇನ್ನು ನಾಗಶೇಖರ್ ಹಾಗೂ ಮಿಲ್ಕ್ ಬ್ಯೂಟಿ ತಮನ್ನಾ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿಬರಲಿದೆ ಅನ್ನುವ ಸಮಾಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದಕ್ಕೂ ಉತ್ತರ ನೀಡಿರುವ ನಾಗಶೇಖರ್ ಇದು ಸತ್ಯವಾದ ವಿಚಾರ. ಕನ್ನಡದ ಲವ್ ಮಾಕ್ಟೇಲ್ ಸಿನಿಮಾವನ್ನು ಸಾಕಷ್ಟು ಮಾಡಿಫೈ ಮಾಡಿ ತೆಲುಗುವಿನಲ್ಲಿ ನಿರ್ಮಾಣ ಮಾಡಿದ್ದೇನೆ. ಈ ಚಿತ್ರಕ್ಕೆ ತಮನ್ನಾ ನಾಯಕಿಯಾಗಿ ನಟಿಸುತ್ತಿದ್ದರೆ, ಸತ್ಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ ಅಂತ ನಾಗಶೇಖರ್ ಹೇಳಿದ್ದಾರೆ ಈ ಸಿನಿಮಾವು ಕೂಡ ಸದ್ಯದಲ್ಲೇ ತೆರೆ ಕಾಣಲಿದೆ.