ಮಕ್ಕಳು ಏನೇ ಮಾಡಿದ್ರೂ ಚಂದ. ಅವರ ಆಟ, ಪಾಠ, ಅಳು, ನಗು ಎಲ್ಲವನ್ನೂ ನೋಡೊದಕ್ಕೆ ಖುಷಿ ಆಗತ್ತೆ. ಮನಸ್ಸಿನಲ್ಲಿ ಏನೆ ನೋವಿದ್ರೂ ಅದನ್ನ ಮರೆಸುವ ತಾಕತ್ತು ಮಕ್ಕಳ ನಗುವಿಗಿರುತ್ತೆ. ಹಾಗಾಗಿ ಮಕ್ಕಳು ಮನೆಯಲ್ಲಿ ಓಡಾಡಿಕೊಂಡು ಇದ್ರೆ ಮನೆ ತುಂಬಾ ನಗುವಿದ್ದಂತೆ. ಖುಷಿ ಇದ್ದಂತೆ. ಇನ್ನು ಆ ಮಕ್ಕಳ ಮುದ್ದಿನ ಮಾತು, ನಿಷ್ಕಲ್ಮಶ ಪ್ರೀತಿ ಎಂಥವರನ್ನಾದರೂ ಕರಗಿಸಿ ಬಿಡುತ್ತೆ.
ಪುಟ್ಟ ಮಕ್ಕಳು ತಾಯಿಯನ್ನ ಬಿಟ್ಟರೆ ಹೆಚ್ಚು ಹಚ್ಚಿಕೊಳ್ಳೋದೆ, ಶಾಲೆಯ ಶಿಕ್ಷಕಿಯರನ್ನ. ಶಾಲೆಯ ಶಿಕ್ಷಕಿಯರೇ ಮಕ್ಕಳಿಗೆ ನಿಜವಾದ ಗುರು. ಅವರ ಮಾತೇ ವೇದ ವಾಕ್ಯ. ಅದೆಷ್ಟೋ ಜನ ಮಕ್ಕಳು ಮನೆಯಲ್ಲಿ ಹೇಳಿದ್ದನ್ನು ನಂಬುವುದಿಲ್ಲ. ಅದೇ ಶಿಕ್ಷಕರು ಹೇಳಿದ್ದಾರೆ ಅಂದರೆ ಅದನ್ನು ನಂಬುತ್ತಾರೆ. ಅಷ್ಟರ ಮಟ್ಟಿಗೆ ಶಿಕ್ಷಕರನ್ನು ಹಚಿಕೊಳ್ಳುತ್ತಾರೆ. ಅದರಲ್ಲೂ ಈಗ ಮಕ್ಕಳಿಗೆ ಬೈಯ್ಯುವುದಾಗಲಿ, ಹೊಡೆಯುವುದಾಗಲಿ ಮಾಡುವ ಹಾಗಿಲ್ಲ.
ಮಕ್ಕಳನ್ನ ಪ್ರೀತಿಯಿಂದಲೇ ಮನವೊಲಿಸಿಕೊಳ್ಳಬೇಕು. ಅವರಿಗೆ ಬುದ್ಧಿ, ನೀತಿ ಪಾಠ ಹೇಳಬೇಕು. ಇತ್ತೀಚಿಗೆ ಒಬ್ಬ ವ್ಯಕ್ತಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಪುಟ್ಟ ಮಗು ಹಾಗೂ ಶಿಕ್ಷಕಿಯ ಸಂವಹನ ನಿಜಕ್ಕೂ ಖುಷಿ ಕೊಡುತ್ತೆ. ಆ ವಿಡಿಯೋ ಅಪ್ಲೋಡ್ ಆಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು ಮಾತ್ರವಲ್ಲದೇ ಜನ ಆ ಪುಟ್ಟ ಮಗುವಿನ ಮುಗ್ಧತೆಗೆ ಆನಂದದ ಕಣ್ಣೀರಿಟ್ಟಿದ್ದಾರೆ.
ನಾವೆಲ್ಲಾ ಶಾಲೆಯಲ್ಲಿ ಓದುವಾಗ ತಪ್ಪು ಮಾಡಿದ್ರೆ ಮುನಿಸಿಕೊಂಡು ಬುದ್ದಿ ಹೇಳುವ, ತಿದ್ದುವ ಗುರುಗಳು ಇರಲಿಲ್ಲ. ಬದಲಿಗೆ ದಂಡಂ ದಶಗುಣಂ ಅಂದವರೇ ಹೆಚ್ಚು. ಈ ವಿಡಿಯೋ ಅಪ್ಲೋಡ್ ಮಾಡಿದ ವ್ಯಕ್ತಿ ಕೂಡ ಇಂಥ ಶಿಕ್ಷಕಿ ನಮಗೆ ಇರಲಿಲ್ಲ ಅಂತ ತಮಾಷೆಯಾಗಿಯೇ ಹೇಳಿದ್ದಾರೆ. ಹಾಗಾದರೆ ಆ ವಿಡಿಯೋದಲ್ಲಿಇದ್ದಿದ್ದಾದರೂ ಏನು ? ಶಾಲೆಯಲ್ಲಿ ಒಬ್ಬ ಪುಟ್ಟ ಹುಡುಗ ಏನೋ ತಪ್ಪು ಮಾಡಿದ್ದಾನೆ.
ಅದಕ್ಕಾಗಿ ಶಿಕ್ಷಕಿಗೆ ಕೋಪ ಬಂದಿದೆ. ಹಾಗಂತ ಅದು ದಂಡಿಸುವ ಕೋಪವಲ್ಲ, ಹುಸಿ ಮುನಿಸು ಅಷ್ಟೇ. ಆದರೆ ಅದನ್ನು ಆ ಮಗುವಿಗೆ ತೋರಿಸಿಕೊಳ್ಳದೇ, ನೀನು ಮತ್ತೆ ಮತ್ತೆ ಸಾರಿ ಕೇಳುತ್ತೀಯಾ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತೀಯಾ, ನನಗೆ ಬೇಸರವಾಗುತ್ತೆ ಅಂತ ಮುನಿಸಿಕೊಂಡೇ ಹೇಳುತ್ತಾರೆ ಶಿಕ್ಷಕಿ. ಅದಕ್ಕೆ ಶಿಕ್ಷಕಿಯ ಕುತ್ತಿಗೆ ಬಳಸಿ ನಿಂತ ಪುಟ್ಟ ಪೋರ, ’ಇಲ್ಲ ಇನ್ನು ಮುಂದೆ ಹೀಗೆ ಮಾಡುವುದಿಲ್ಲ .. ಕ್ಷಮಿಸಿ’ ಎಂತ ಬಾರಿ ಬಾರಿ ಕೇಳುತ್ತಾನೆ.
ಆದರೆ ಶಿಕ್ಷಕಿಗೆ ಮಾತ್ರ ಸಿಟ್ಟು ಕಡಿಮೆ ಆಗುವುದೇ ಇಲ್ಲ. .ಮತ್ತೆ ಮತ್ತೆ ನೀನು ಸಾರಿ ಕೇಳಿ ಅದನ್ನೇ ಮಾಡುತ್ತೀಯಾ ನನಗೆ ಕೋಪ ಬಂದಿದೆ ಅಂತ ಕೆನ್ನೆ ಊದಿಸಿಕೊಳ್ಳುತ್ತಾರೆ. ಪಾಪ ಆ ಹುಡುಗ ಮಾತ್ರ ಶಿಕ್ಷಕಿಯ ಕೋಪ ಕಡಿಮೆ ಮಾಡಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾನೆ. ನೂರಾರು ಬಾರಿ ಮತ್ತೆ ಹಾಗೆ ಮಾಡುವುದಿಲ್ಲ ಕ್ಷಮಿಸಿ ಅಂತ ಕೇಳುತ್ತಾನೆ. ಕೊನೆಗೂ ಶಿಕ್ಷಕಿ ಕೋಪ ಇಳಿಸದೇ ಬಿಡುವುದಿಲ್ಲ ಪೋರ.
ಶಿಕ್ಷಕಿಯ ಕೆನ್ನೆಗೆ ಮುತ್ತುಕೊಟ್ಟು ಮತ್ತೆ ಸಾರಿ ಕೇಳಿ ತನ್ನ ಪ್ರೀತಿಯ ಶಿಕ್ಷಕಿಯ ಕೋಪ ಇಳಿಸುತ್ತಾನೆ. ಇದಲ್ವೇ ನಿಜವಾದ ಪ್ರೀತಿ ಅಂದ್ರೆ. ಯಾವುದೇ ಕಲ್ಮಶವೂ ಇಲ್ಲದ ಆ ಪುಟ್ಟ ಮಗುವಿನ ಮುಗ್ಧ ಪ್ರೀತಿಗೆ ಆ ಶಿಕ್ಷಕಿ ಮಾತ್ರವಲ್ಲ, ಆ ದೇವರೇ ಕರಗಿಹೋಗುವುದು ಖಂಡಿತ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋಗೆ ಕಮೆಂಟ್ ಗಳ ಸುರಿಮಳೆಯೇ ಬರುತ್ತಿದೆ.